ಕುಬ್ಜೆ  

 ಪ್ರಾಚೀನ ಸಾಹಿತ್ಯದಲ್ಲಿ ಈ ಹೆಸರಿನ ಇಬ್ಬರು ಪ್ರಸಿದ್ಧರು. ಒಬ್ಬಳು ರಾಮಾಯಣದ ಮಂಥರೆ, ಕೈಕೆಯ ದಾಸಿ. ಈಕೆಗೆ ತ್ರಿವತ್ರೆ ಎಂಬ ಹೆಸರೂ ಇತ್ತು. ಈಕೆಯ ದುರ್ಬೋಧನೆಯಿಂದ ಕೈಕೆ ರಾಮನನ್ನು ವನಕ್ಕೆ ಕಳುಹಿಸಿದಳು. ಕುವೆಂಪು ವಿರಚಿತ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಮಂಥರೆಯನ್ನು ದುರಂತ ಪಾತ್ರವನ್ನಾಗಿ ಚಿತ್ರಿಸಲಾಗಿದೆ.

 ಭಾಗವತದಲ್ಲಿ ಬರುವ ಕುಬ್ಜೆ ಕಂಸನಿಗೆ ಸುಗಂಧ ದ್ರವ್ಯಗಳನ್ನು ಕೊಡುತ್ತಿದ್ದ ಸೇವಕಿ. ಕಂಸನ ವಧಕ್ಕಾಗಿ ಬಲರಾಮ ಮತ್ತು ಕೃಷ್ಣ ಮಧುರೆಗೆ ಬಂದಾಗ ರಾಜವೀಧಿಯಲ್ಲಿ ಅವರನ್ನು ಕಂಡು ಸುಗಂಧ ದ್ರವ್ಯಗಳಿಂದ ಉಪಚರಿಸಿದಳು. ಅದರಿಂದ ಪ್ರಸನ್ನನಾದ ಶ್ರೀಕೃಷ್ಣ ಇವಳ ಗೂನನ್ನು ತೊಲಗಿಸಿದ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ